ಭಾನುವಾರ, ನವೆಂಬರ್ 2, 2008

ಕರ್ನಾಟಕ ರಾಜ್ಯೋತ್ಸವ

ಕರ್ನಾಟಕ ರಾಜ್ಯೋತ್ಸವ ೨೦೦೮

ಪರದೇಶದಲ್ಲಿ ನಮ್ಮ ಮಾತೃಭೂಮಿಯನ್ನು ನೆನೆಯುವಾಗ ಆಗುವ ಆನಂದ ಹೇಳತೀರದು. ಈ ಸವಿ ಅನುಭವವನ್ನು ಬಹುಶಃ ಅನುಭವಿಸದೇ ತಿಳಿಯಲು ಕಷ್ಟಸಾಧ್ಯ. ಹುಟ್ಟೂರಿನಿಂದ ದೂರ ಇರುವ ಜನ ತಮ್ಮೂರನ್ನು ನೆನೆದು ಸ್ವಲ್ಪ ಮಟ್ಟಿಗೆ ಇದನ್ನು ಅನುಭವಿಸಿರಬೇಕು. ನಾವಿರುವುದು ಸುಂದರವಾದ ಸುವಾನ್ ನಗರಿಯಲ್ಲಿ, ದಕ್ಷಿಣ ಕೊರಿಯಾ ದೇಶದಲ್ಲಿರುವ ಒಂದು ಸುಂದರ ನಗರ. ಕೆಲಸದ ಒತ್ತಡದಲ್ಲಿ ನಮ್ಮ ದೇಶವನ್ನು ಆ ಸಮಯದಲ್ಲಾದರೂ ಮರೆತಿರುತ್ತೇವೆ, ಆದರೆ ಅದನ್ನು ನೆನೆಯಲು ಒಂದು ಸಂದರ್ಭ ಅಂತ ಸಿಕ್ಕರೆ? ಹೌದು, ಇಂದು ಕನ್ನಡಿಗರಿಗೆಲ್ಲ ಶುಭದಿನ,ಕರ್ನಾಟಕ ರಾಜ್ಯೋತ್ಸವ.ಇಂದು ಕನ್ನಡದ ಮಿತ್ರರೊಂದಿಗೆ ಸೇರಿ ಈ ಶುಭದಿನವನ್ನು ಆಚರಿಸುವ ಉತ್ಸಾಹ.

ನನ್ನ ಮಿತ್ರರಾದ ಲೋಹಿತ್,ಮಿತ್ರೇಶ್ ಮತ್ತು ಮಧು ಈ ಶುಭದಿನದ ಸಂಭ್ರಮದ ಆಚರಣೆಗೆ ತಯಾರಿಯನ್ನು ಒಂದು ವಾರ ಮುಂಚಿತವಾಗಿಯೇ ಪ್ರಾರಂಭಿಸಿದ್ದರು. 'ಸುವಾನ್' ನಲ್ಲಿರುವ ಎಲ್ಲ ಕನ್ನಡಿಗರಿಗು ಇ-ಸಂದೇಶ ಕಳುಹಿಸಿ ಕಾರ್ಯಕ್ರಮದ ರೂಪುರೇಶೆಗಳನ್ನು ತಿಳಿಸಿದ್ದರು. ಯಾವಾಗಲು ಆಗುವ ಹಾಗೆ ಕೆಲಸದ ಒತ್ತಡದಲ್ಲಿ ಸಿದ್ಧತೆಗಳು ಸ್ವಲ್ಪ ಮಂದ ಗತಿಯಲ್ಲಿ ಸಾಗುತ್ತಿದ್ದವು. ಕನ್ನಡೇತರ ಮಿತ್ರರಿಗೂ ಆಹ್ವಾನ ನೀಡಿಯಾಗಿತ್ತು. ಇಂದು ಆ ಶುಭದಿನ ಬೆಳಿಗ್ಗೆನೇ ಗೆಳೆಯ ಮಧುಸೂಧನ ಬಂದು ನನ್ನ ಎಬ್ಬಿಸಿದ. ಕಾರ್ಯಕ್ರಮದ ಸಿದ್ಧತೆಯ ಬಹುಭಾಗ ಹಾಗೆ ಉಳಿದಿದೆ ಎಂದು ನೆನಪಿಸಿದ. ಸ್ವಲ್ಪ ಆತಂಕವಾದರೂ ತಾಯಿ ಭುವನೇಶ್ವರಿಯ ಮೇಲೆ ಭಾರ ಹಾಕಿ ಕಾರ್ಯಪ್ರವೃತ್ತರಾದೆವು.

ನಮ್ಮ ಸಿದ್ಧತೆಗೆ ಗಣನೀಯ ತೀವ್ರತೆ ಬಂದದ್ದು ಮಿತ್ರರಾದ ಲೋಹಿತ್ ಮತ್ತು ಉಜ್ಜನೆಪ್ಪ ಅವರು ಸಕಲ ಸಾಮಗ್ರಿಗಳೊಂದಿಗೆ ಬಂದಾಗ. ಹೂ, ಧ್ವಜ, ಧ್ವಜದ ಕಂಬ, ಅಲಂಕಾರದ ವಸ್ತುಗಳೆಲ್ಲವನ್ನು ತಂದಿದ್ದರು. ನಮ್ಮ ಕನ್ನಡ ಮಿತ್ರರೆಲ್ಲರು ಸೇರಿ ಸಿದ್ಧತೆಯನ್ನು ಪೂರ್ಣಗೊಳಿಸಿದೆವು. ಧ್ವಜಾರೋಹಣಕ್ಕೆಂದು ಗುರುತಿಸಲಾಗಿದ್ದ ಸ್ಥಳವು ಕಾರಣಾಂತರಗಳಿಂದಾಗಿ ದೊರೆಯುವುದಿಲ್ಲವೆಂದು ಕೊನೆ ಘಳಿಗೆಯಲ್ಲಿ ತಿಳಿಯಿತು, ಆದರೂ ತೊಂದರೆಯಾಗಲಿಲ್ಲ, ಬೇರೊಂದು ಒಳ್ಳೆಯ ಸ್ಥಳದ ವ್ಯವಸ್ಥೆಯಾಯಿತು. ಧ್ವಜಾರೋಹಣಕ್ಕೆ ಎಲ್ಲರು ಅಣಿಯಾದರು. ನಮಗೆ ಸಂತಸ ತಂದ ಇನ್ನೊಂದು ಸಂಗತಿಯೆಂದರೆ ಉಳಿದ ನಮ್ಮ ಕನ್ನಡೇತರ ಮಿತ್ರರ ಸಹಾಯ ಮತ್ತು ಸಹಕಾರ. ಅವರ ಈ ಸಹಕಾರವನ್ನು ನಾನು ಇಲ್ಲಿ ತಿಳಿಸದಿದ್ದರೆ ತಪ್ಪಾಗುತ್ತದೆ.

ಮಿತ್ರೇಶ್ ಅವರು ನಾಡಗೀತೆಯೊಂದಿಗೆ ತಮ್ಮ ಲ್ಯಾಪ್ಟಾಪನ್ನು ಸಿದ್ಧಗೊಳಿಸಿದ್ದರು. ಮೊದಲನೇಯದಾಗಿ ಅವರಿಂದ ಎಲ್ಲ ಮಿತ್ರರನ್ನುದ್ದೇಶಿಸಿ ಒಂದು ಪುಟ್ಟ ಭಾಷಣ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿದ್ದನ್ನು ಇಲ್ಲಿ ನೆನೆದು ಹೆಮ್ಮೆ ಪಟ್ಟೆವು. ನಂತರ ಗೆಳೆಯ ಅಶೋಕ ಅವರಿಂದ ಧ್ವಜಾರೋಹಣವಾಯಿತು. ನಾಡಗೀತೆಯನ್ನು ಲ್ಯಾಪ್ಟಾಪ್ನಲ್ಲಿ ಕೇಳುತ್ತಾ ಅದರೋಂದಿಗೆ ಧ್ವನಿ ಗೂಡಿಸಿದೆವು, ಕನ್ನಡಾಂಬೆಗೆ ಹೃದಯಪೂರ್ವಕ ಭಕ್ತಿಯನ್ನು ಅರ್ಪಿಸಿದೆವು.

ಎಲ್ಲರೂ ಸೇರಿ ಈ ಸಂಭ್ರಮದ ನೆನಪುಗಳನ್ನು ಬಹುಕಾಲ ಕಾಯ್ದಿಟುಕೊಳ್ಳಲು ಫೋಟೋದಲ್ಲಿ ಸೆರೆಹಿಡಿದುಕೊಂಡೆವು. ನಂತರ ಎಲ್ಲರಿಗೂ ಸಿಹಿ ಹಂಚಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕನ್ನಡೇತರ ಅತಿಥಿ ಮಿತ್ರರಿಗೆಲ್ಲ ಧನ್ಯವಾದಗಳನ್ನು ಸಲ್ಲಿಸಿ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದೆವು. ಮಿತ್ರ ಮಂಜುನಾಥ ಅವರು ಕೆಲ ಮಿತ್ರರಿಗೆ ಚಹಾ ಪಾನದ ವ್ಯವಸ್ಥೆನ್ನು ಮಾಡಿದರು.

೫೩ನೇ ಕನ್ನಡ ರಾಜ್ಯೋತ್ಸವವನ್ನು ವಿದೇಶದಲ್ಲಿ ಅಷ್ಟೊಂದು ಅದ್ದೂರಿಯಲ್ಲದಿದ್ದರೂ, ಸರಳವಾಗಿ ಸಂಭ್ರಮದಿಂದ ಆಚರಿಸಿದೆವು. ಬಹುಶಃ ಬಂದ ಬಹುಭಾಗ ಮಿತ್ರರೆಲ್ಲರ ಮನದಲ್ಲಿ ಮುಂದಿನ ರಾಜ್ಯೋತ್ಸವವನ್ನು ಕರ್ನಾಟಕದಲ್ಲೇ ಆಚರಿಸುವ ಆಸೆಯಾಗಿರುತ್ತದೆ ಎಂದು ಭಾವಿಸುತ್ತೇನೆ. ತಾಯಿ ಭುವನೇಶ್ವರಿ ನಮ್ಮೆಲ್ಲರ ಆಸೆಗಳನ್ನು ಈಡೇರಿಸಲೆಂದು ಹಾರೈಸುವೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಹಾಗೆ ನಾವೆಲ್ಲಿದ್ದರು ಕನ್ನಡಿಗರು, ಕನ್ನಡದ ಸೇವೆಗಾಗಿ ಶ್ರಮಿಸುವವರು. ಕನ್ನಡದ ನೆಲ, ಜಲ, ಗಾಳಿಯನ್ನು ಎಂದೂ ಮರೆಯಲಾಗದು. ನಾವು ಇವತ್ತು ಜೀವನದಲ್ಲಿ ಏನನ್ನಾದರು ಸಾಧಿಸಿದ್ದರೆ, ಸುಖವಾಗಿದ್ದರೆ, ಯಶಸ್ಸನ್ನು ಗಳಿಸಿದ್ದರೆ ಅದರಲ್ಲಿ ಬಹುಪಾಲು ಕನ್ನಡಕ್ಕೆ, ಸಮಾಜವನ್ನರಿಯಲು, ಜ್ಞಾನವನ್ನು ಬೆಳೆಸಿಕೊಳ್ಳಲು ಗುರುವಾದ ನಮ್ಮ ಮಾತೃಭಾಷೆಗೆ. ಎಲ್ಲಾದರು ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.

ಜೈ ಕರ್ನಾಟಕ ಮಾತೆ....ಜೈ ಕನ್ನಡಾಂಬೆ.....ಜೈ ಭುವನೇಶ್ವರಿ.


3 ಕಾಮೆಂಟ್‌ಗಳು:

ಸಿದ್ಧಾರ್ಥ ಹೇಳಿದರು...

ತಮ್ಮ ಬ್ಲಾಗ್ ನೋಡಿ ತುಂಬಾ ಸಂತೋಷ ಆಯ್ತು. ಅದೂ ರಾಜ್ಯೋತ್ಸವದ ದಿನ ಶುರು ಮಾಡಿದೀರಾ. ನಾವು ಬಹಳಷ್ಟು ವಿಷಯಗಳನ್ನ ನಿಮ್ಮ ಬ್ಲಾಗ್ ಮುಖಾಂತರ ತಿಳಿದುಕೊಳ್ಳುವಂತಾಗಲಿ ಅಂತ ಆಶಿಸ್ತೇನೆ.

ಜೈ ತಾಯೆ ಭುವನೇಶ್ವರಿ.

ವಿಜಯ್ ಶೀಲವಂತರ ಹೇಳಿದರು...

ತುಂಬ ಧನ್ಯವಾದಗಳು ಸಿದ್ಧಾರ್ಥ.....ನಿನ್ನ ಪ್ರೋತ್ಸಾಹ ಹೀಗೆ ಇರಲಿ. :)

ದೀಪಕ ಹೇಳಿದರು...

ವಿಜಯ್,

ನಿನ್ನ ಮೊದಲನೇ ಲೇಖನ - ಕನ್ನಡ ತಾಯಿಯ ಕುರಿತದ್ದು - ಸೊಗಸಾಗಿದೆ. ಕ್ರಿಕೆಟ್ ಆಟದಲ್ಲಿ ಮೊದಲ ಪ೦ದ್ಯದಲ್ಲೇ ಶತಕ ಬಾರಿಸಿದ ಹಾಗೆ, ನಿನ್ನ ಮೊದಲನೇ ಲೇಖನವು thatskannada.com ನಲ್ಲಿ ಪ್ರಕಟವಾಗಿರುವುದು ನಿಜಕ್ಕೂ ಸ೦ತೋಷದ ವಿಷಯ ಮತ್ತು ಪ್ರಶ೦ಸನೀಯವಾದ೦ತಹದ್ದು.

ಹೀಗೆಯೇ ನಿನ್ನ ಹೃದಯದ ಮಾತುಗಳು ಮುಕ್ತವಾಗಿ ಹೊರಬರುತ್ತಿರಲಿ.

ಇ೦ತಿ,

ದೀಪಕ